ಕೇರಳದ ನಾಣ್ಯಗಳು

ಕೇರಳದ ನಾಣ್ಯಗಳನ್ನು ಕುರಿತ ಅಧ್ಯಯನ ಇಲ್ಲಿಯವರೆಗೆ ಕ್ರಮಬದ್ಧವಾಗಿ ನಡೆದಿಲ್ಲ. ಕೋಟ್ಟಯಂ ಹಾಗೂ ಇಯ್ಯಲ್ ಎಂಬಲ್ಲಿ ಹಲವು ವರ್ಷಗಳ ಹಿಂದೆ ಕಂಡು ಬಂದ ಎರಡು ನಾಣ್ಯರಾಶಿಗಳಲ್ಲಿ ಹಲವು ಮುದ್ರಾಂಕಿತ ಅಥವಾ ಅಚ್ಚೊತ್ತಿದ ನಾಣ್ಯಗಳೂ (ಪಂಚ್‍ಮಾಕ್ರ್ಡ್) ರೋಮನ್ ನಾಣ್ಯಗಳೂ ದೊರೆತುವು. ಅಚ್ಚೊತ್ತಿದ ನಾಣ್ಯಗಳು ಭಾರತದಲ್ಲಿ ಕ್ರಿ.ಪೂ. ಸು. 7ನೆಯ ಶತಮಾನದಿಂದಲೂ ಚಲಾವಣೆಯಲ್ಲಿದ್ದುವೆಂದು ತಿಳಿದು ಬರುತ್ತದೆ. ಕೇರಳದಲ್ಲಿ ದೊರೆತಿರುವ ಅಚ್ಚೊತ್ತಿದ ನಾಣ್ಯಗಳ ಕಾಲವನ್ನು ನಿರ್ಣಯಿಸುವುದು ಕಷ್ಟಸಾಧ್ಯ. ಆದರೂ ಅವುಗಳ ಮೇಲೆ ಮುದ್ರಿತವಾಗಿರುವ ಚಿಹ್ನೆಗಳು ಭಾರತದ ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ದೊರೆತಿರುವ ಅಂಥ ನಾಣ್ಯಗಳ ಮುದ್ರಿತ ಚಿಹ್ನೆಗಳೊಂದಿಗೆ ಸರಿ ಹೊಂದುತ್ತದೆ. ರೋಮನ್ ನಾಣ್ಯಗಳಲ್ಲಿ ಕ್ರಿ.ಶ. 1ನೆಯ ಶತಮಾನದ ಅರಸುಗಳಾದ ಟೈಬೀರಿಯಸ್, ಕ್ಲಾಡಿಯಸ್, ನೀರೋ, ಟ್ರೇಜನ್, ಆಗಸ್ಟಸ್ (ಆಕ್ಟೇವಿಯನ್) ಇವರು ಹೊರಡಿಸಿದ ನಾಣ್ಯಗಳೂ ರೋಮನ್ ಪ್ರಜಾರಾಜ್ಯ ನಾಣ್ಯಗಳೂ ದೊರೆತಿವೆ.

	ಕೇರಳದ ಮಧ್ಯಯುಗೀನ ಶಾಸನಗಳಲ್ಲಿ ಕವಿಂಜು, ಕಾಣಂ ಎಂಬ ಬಂಗಾರದ ನಾಣ್ಯಗಳ, ಪಣಂ, ಕಾಶು, ಅವಿಗಚ್ಚು ಇತ್ಯಾದಿ ಹಲವು ಬಗೆಯ ಇತರ ನಾಣ್ಯಗಳ ಉಲ್ಲೇಖವಿದೆ. 9ನೆಯ ಶತಮಾನದ ಕೇರಳದ ಶಾಸನವೊಂದರಲ್ಲಿ ಉಕ್ತವಾಗಿರುವ ತೀನಾರಂ ಎಂಬ ನಾಣ್ಯ ದೀನಾರವನ್ನು ನೆನಪಿಸುತ್ತದೆ. ಮಧ್ಯಯುಗದ ಪೂರ್ವಾರ್ಧದಲ್ಲಿ ಕೇರಳದ ಮೇಲೆ ಚೋಳರ ಪ್ರಭಾವ ಗಣನೀಯ ಪ್ರಮಾಣದ್ದಾಗಿತ್ತಾಗಿ, ಇಲ್ಲಿ ಚೋಳರ ನಾಣ್ಯಗಳೂ ಚಲಾವಣೆಯಲ್ಲಿದ್ದಿರಬೇಕು. ಇನ್ನು ಸ್ಥಳೀಯ ಅರಸರಾದ ಚೇರರ ನಾಣ್ಯಗಳು ಕೇರಳದಲ್ಲಿ ದೊರೆತಿಲ್ಲವಾದರೂ 10ನೆಯ ಶತಮಾನದ ವೇಳೆಗೆ ಅವರು ಸ್ವಾಧೀನಪಡಿಸಿಕೊಂಡ ಕೊಂಗು ಪ್ರಾಂತ್ಯದಲ್ಲಿ ಚೇರರ ಬಿಲ್ಲಿನ ಚಿಹ್ನೆಯಿಂದ ಕೂಡಿದ ಬಂಗಾರದ ಹಾಗೂ ತಾಮ್ರದ ನಾಣ್ಯಗಳು ದೊರೆತಿವೆ. ಶ್ರೀ ವೀರಕೇರಲಸ ಎಂಬ ನಾಗರೀ ಆಲೇಖ್ಯದಿಂದ ಕೂಡಿದ ನಾಣ್ಯಗಳೂ 11-12ನೆಯ ಶತಮಾನಗಳಲ್ಲಿ ಕೇರಳದಲ್ಲಿ ಚಲಾವಣೆಯಲ್ಲಿದ್ದುವು. ತಿರುವಾಂಕೂರು ಪ್ರದೇಶದಲ್ಲಿ ಚಲಾವಣೆಯಲ್ಲಿದ್ದ ರಾಶಿ ಎಂಬ ನಾಣ್ಯಗಳು 10ನೆಯ ಶತಮಾನದಷ್ಟು ಹಿಂದಿನವಿದ್ದಿರಬಹುದು ಎಂದು ಊಹಿಸಲಾಗಿದೆ.

	ಕೇರಳ ಇತಿಹಾಸದ ಮಧ್ಯಯುಗದ ಉತ್ತರಾರ್ಧಕ್ಕೆ ಹಾಗೂ ಅನಂತರದ ಕಾಲಕ್ಕೆ ಸಂಬಂಧಿಸಿದಂತೆ ಮೊಗಲ್ ಅರಸರ ಬೆಳ್ಳಿ ನಾಣ್ಯಗಳೂ ವಿಜಯನಗರದ ನಾಣ್ಯಗಳೂ ಟಿಪ್ಪು ಸುಲ್ತಾನನ ತಾಮ್ರದ ಪೈಸೆಗಳೂ ವೀರರಾಯ ಪಣ, ರಾಶಿಪಣ ಎಂಬ ನಾಣ್ಯಗಳೂ ಇಂಗ್ಲಿಷ್ ದೊರೆ 4ನೆಯ ವಿಲಿಯಂ ಹಾಗೂ ವಿಕ್ಟೋರಿಯ ರಾಣಿಯ ಬೆಳ್ಳಿ ನಾಣ್ಯಗಳೂ ದೊರೆತಿವೆ.

	ಇನ್ನು 17-19ನೆಯ ಶತಮಾನಗಳ ಅವಧಿಯಲ್ಲಿ ಕೇರಳದ ತಿರುವಾಂಕೂರು, ಕೊಚ್ಚಿ, ಕಣ್ಣನ್ನೂರು ಮತ್ತು ಕೋಳಿಕ್ಕೋಡ್ ಸಂಸ್ಥಾನಗಳು ಹೊರಡಿಸಿದ ಹಲವು ಬಗೆಯ ನಾಣ್ಯಗಳಲ್ಲಿ (ಬಂಗಾರದ) ಅನಂತರಾಯನ್ ಪಣಂ, ಅದರ ಅರ್ಧದಷ್ಟು ಮೌಲ್ಯದ ಚಿನ್ನ ಪಣಂ, ಕಲಿಪಣಂ, (ಬೆಳ್ಳಿಯ) ವೆಳ್ಳಿಪಣಂ, ಚಕ್ರಂ, ಚಿನ್ನ ಚಕ್ರಂ, ಪುತ್ತನ್ ಮತ್ತು (ತಾಮ್ರದ) ಕಾಶು, ಅರಚಕ್ರಂ-ಇವು ಮುಖ್ಯವಾದವು.

	ಕೇರಳದಲ್ಲಿ ದೊರೆತಿರುವ ವಿದೇಶಿ ನಾಣ್ಯಗಳಲ್ಲಿ ರೋಮನ್ ನಾಣ್ಯಗಳಷ್ಟೇ ಅಲ್ಲದೆ ಈಜಿಪ್ಟಿನ ಆಟೋಮನ್ ಕಲೀಫರು ಹೊರಡಿಸಿದ ಬಂಗಾರದ ನಾಣ್ಯಗಳೂ ಸೇರಿವೆ.                					
 (ಕೆ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ